ಇಮಾದ್‍ಷಾಹಿ ಸುಲ್ತಾನರು

ಬಹಮನಿ ರಾಜ್ಯ ಹದಿನಾಲ್ಕು ಮತ್ತು ಹದಿನೈದನೆಯ ಶತಮಾನದ ಅಂತ್ಯಕಾಲಕ್ಕೇ ಒಡೆದು ಐದು ಸಣ್ಣ ಸಣ್ಣ ಸ್ವತಂತ್ರರಾಜ್ಯಗಳಾದಾಗ. ಮೊತ್ತಮೊದಲು ಸ್ಥಾಪಿತವಾದದು. ಬೀರಾರಿನ ಇಮಾದ್ ಷಾಹಿ ಸುಲ್ತಾನರ ರಾಜ್ಯ, ಉಳಿದ ನಾಲ್ಕೆಂದರೆ ಅಹಮದ್‍ನಗರದ ನಿಜಾಂಷಾಹಿ, ಬಿಜಾಪುರದ ಆದಿಲ್‍ಷಾಹಿ. ಗೋಲ್ಕೊಂಡದ ಕುತುಬ್‍ಷಾಹಿ. ಬೀದರಿನ ಬಾರೀದ್‍ಷಾಹಿ. ಈ ಒಂದೊಂದು ರಾಜ್ಯಕ್ಕೂ ಅದರ ಸ್ಥಾಪಕನ ಹೆಸರನ್ನೇ ಇಡಲಾಗಿದೆ. ಬೀರಾರ್ ಬಹಮನಿ ರಾಜ್ಯದ ಉತ್ತರ ಭಾರತದಲ್ಲಿದ್ದ ಪ್ರಾಂತ್ಯ. ಹಿಂದೆ ಇದು ವಿದರ್ಭ ದೇಶವೆಂದು ಹೆಸರು ಪಡೆದಿತ್ತು. ಹದಿನೈದನೆಯ ಶತಮಾನದ ಅಂತ್ಯಕಾಲದಲ್ಲಿ ಇದು ಎರಡು ದೊಡ್ಡ ಜಿಲ್ಲೆಗಳಾಗಿ ವಿಭಾಗಿಸಲ್ಪಟ್ಟಿತ್ತು: ಉತ್ತರದ ಗಾವೀಲ್ ಜಿಲ್ಲೆ ಮತ್ತು ದಕ್ಷಿಣದ ಮಾಹೂರ್ ಜಿಲ್ಲೆ. ಬಹಮನಿ ರಾಜ್ಯದ ಕೊನೆಯ ಸುಲ್ತಾನ ಮಹಮ್ಮದ್‍ಷಾಹನ ಕಾಲದಲ್ಲಿ (1482-1518) ಗಾವೀಲ್ ಘಡದ ಪ್ರಾಂತ್ಯಾಧಿಪತಿ ಇಮಾದ್‍ಉಲ್‍ಮುಲ್ಕ್ ಎಂಬ ಹೆಸರಿನಿಂದ ಸ್ವಾತಂತ್ರ್ಯ ಘೋಷಿಸಿದ. ಇಮಾದ್‍ಷಾಹಿ ಸಂತತಿ ಹೀಗೆ ಮೊದಲಾಯಿತು. ಅಸಮರ್ಥನಾದ ಬಹಮನಿ ಸುಲ್ತಾನನಿಗೆ ಇವನನ್ನಡಗಿಸಲು ಸಾದ್ಯವಾಗಲಿಲ್ಲ, ನಾಲ್ಕು ತಲೆಮಾರು ಕಾಲ ಈ ಸಂತತಿಯವರು ಸ್ವತಂತ್ರ್ಯರಾಗಿ ಆಳಿದರು. 1574ರಲ್ಲಿ ಬೀರಾರನ್ನು ಅಹಮ್ಮದ್ ನಗರದ ಸುಲ್ತಾನರು ವಶಪಡಿಸಿಕೊಂಡರು. 

	ಇಮಾದ್‍ಷಾಹಿ ಅರಸರ ಕಾಲದಲ್ಲಿ ಚಾರಿತ್ರಿಕ ಪ್ರಾಮುಖ್ಯವನ್ನುಳ್ಳ ಘಟನೆಗಳೇನೂ ನಡೆಯಲಿಲ್ಲ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ